ಚಿದಾನಂದ -
ಕನ್ನಡದಲ್ಲಿ ಈ ಹೆಸರಿನ ಮೂವರು ಕವಿಗಳಿದ್ದಾರೆ. ಇವರಲ್ಲಿ ಒಬ್ಬ ಚಿದಾನಂದನ ಕಾಲ ಸು. 1680. ಈತ ಜೈನಕವಿ. ಮೈಸೂರು ದೊರೆ ಚಿಕ್ಕದೇವರಾಜನನ್ನು (1672-1704) ಸ್ತುತಿಸಿರುವುದರಿಂದ ಈತ ಚಿಕ್ಕದೇವರಾಜನ ಕಾಲದಲ್ಲಿದ್ದವನೆನ್ನಲಾಗಿದೆ. ಚಿಕ್ಕದೇವರಾಜನ ವಂಶಾವಳಿಯನ್ನೂ ಶ್ರವಣಬೆಳ್ಗೊಳಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನೂ ತನ್ನ ಕೃತಿ ಮುನಿವಂಶಾಭ್ಯುದಯದಲ್ಲಿ ಹೇಳಿದ್ದಾನೆ. 16 ಸಂದಿ ಮತ್ತು 2630 ಪದ್ಯಗಳನ್ನು ಒಳಗೊಂಡಿರುವ ಈ ಗ್ರಂಥ ಸಾಂಗತ್ಯದಲ್ಲಿದೆ. ಜೈನ ಮುನಿಗಳ-ಮುಖ್ಯವಾಗಿ ಮೂಲ ಸಂಘದ ದೇಶೀಯ ಗಣದ ಕೊಂಡ ಕುಂದಾನ್ವಯದ ಮುನಿಗಳ ಪರಂಪರೆಯನ್ನು ಕವಿ ಇದರಲ್ಲಿ ಹೇಳಿದ್ದಾನಲ್ಲದೆ, ಶ್ರುತಕೇವಲಿಯಾದ ಭದ್ರಬಾಹು ಬೆಳ್ಗೊಳಕ್ಕೆ ಬಂದು ಚಿಕ್ಕ ಬೆಟ್ಟದಲ್ಲಿ ಇದ್ದಂತೆಯೂ ಚಂದ್ರಗುಪ್ತ ಇಲ್ಲಿಗೆ ಬಂದು ದೀಕ್ಷೆ ಪಡೆದಂತೆಯೂ ಹೇಳಿದ್ದಾನೆ. ರಾಜನೀತಿ, ಆತ್ಮಜಿಜ್ಞಾಸೆ ಮುಂತಾದ ವಿಷಯಗಳನ್ನು ಕುರಿತೂ ಬರೆದಿದ್ದಾನೆ. ಗ್ರಂಥದ ಪ್ರಾರಂಭದಲ್ಲಿ ಜಿನಸ್ತುತಿ ಇದೆ.

ಇನ್ನೊಬ್ಬ ಚಿದಾನಂದ ಕಾಲ ಸು. 1675. ಈತ ಬ್ರಾಹ್ಮಣ, ಜ್ಞಾನ ಸಿಂಧುವನ್ನು ಬರೆದ ಚಿದಾನಂದಾವಧೂತನ ಗುರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿರುವ ಬೈಲೂರು ಈತನ ಸ್ಥಳ. ಚಿದಖಂಡಾನು ಭವಸಾರ, ಹರಿಭಕ್ತಸಾರ ಈತನ ಕೃತಿಗಳು. ಕೆಲವು ಹಾಡುಗಳನ್ನು ರಚಿಸಿದ್ದಾನೆ. ಇವಕ್ಕೆ ಚಿದಾನಂದರ ಕೋರಡೆ ಎಂಬ ಹೆಸರಿದೆ.

ಮತ್ತೊಬ್ಬ ಚಿದಾನಂದನ ಕಾಲ ಸು. 1234. ಈತನೂ ಬ್ರಾಹ್ಮಣ. ಈತ ಪರಮ ಪ್ರಕಾಶ ಯೋಗಿಶ್ವರನ ಮಗನೆಂದೂ ಬ್ರಹ್ಮವಿದ್ಯಾವೇತ್ತನೆಂದೂ ಸತ್ಕವೀಶ್ವರನೆಂದು ಈತನ ಕೆಲವು ಪದ್ಯಗಳಿಂದ ಗೋತ್ತಾಗುತ್ತದೆ. ಮಂಡ್ಯದ 121,122ನೆಯ ಶಾಸನಗಳನ್ನು ಈತ ರಚಿಸಿದನೆಂದು ತಿಳಿದುಬರುತ್ತದೆ.					(ಎಂ.ಸಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ